ಪುತ್ತೂರು ಪ್ರತಿಭಟನೆ: ದ್ವೇಷ ಭಾಷಣ ಆರೋಪ – ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

 



ಮಂಗಳೂರು: ಪುತ್ತೂರಿನ ದರ್ಬೆಯಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ಆಗಸ್ಟ್ 31ರಂದು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಒಂದು ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಲಾಗಿದೆ ಎಂದು ಆರೋಪಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಸಮಾನ ಮನಸ್ಕರ ಒಕ್ಕೂಟ, ಘಟನೆಯನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಒಕ್ಕೂಟದ ಸಂಚಾಲಕ ಸಲಾಂ ಉಚ್ಚಿಲ್, ಒಂದು ಧರ್ಮದ ನಿಗದಿತ ಧಾರ್ಮಿಕ ಕಾರ್ಯಕ್ರಮದ ದಿನವೇ ಬಂದ್‌ಗೆ ಕರೆ ನೀಡುವ ಮೂಲಕ ಸಮಾಜದಲ್ಲಿ ಅಶಾಂತಿ ಹಾಗೂ ಧಾರ್ಮಿಕ ವೈಷಮ್ಯ ಉಂಟಾಗುವಂತಹ ವಾತಾವರಣ ಸೃಷ್ಟಿಸಲು ಪ್ರಯತ್ನಿಸಿದವರ ವಿರುದ್ಧ ಇದುವರೆಗೆ ಕಾನೂನು ಕ್ರಮ ಕೈಗೊಳ್ಳದಿರುವುದಕ್ಕೆ ಪ್ರಶ್ನೆ ಎತ್ತಿದ್ದಾರೆ.

ಅದೇ ರೀತಿ, ‘ಪುತ್ತೂರು ಚಲೋ’ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಪ್ರಚೋದನಕಾರಿ ಹಾಗೂ ಅವಹೇಳನಕಾರಿ ಘೋಷಣೆಗಳನ್ನು ಕೂಗಲಾಗಿದೆ ಎಂದು ಆರೋಪಿಸಿರುವ ಅವರು, ಈ ವಿಚಾರದಲ್ಲಿಯೂ ಇದುವರೆಗೆ ಕಾನೂನು ಕ್ರಮ ಕೈಗೊಳ್ಳದಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

“ಕಾನೂನು ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ಅದು ಸಾಕ್ಷ್ಯ ಮತ್ತು ಕಾನೂನಿನ ಆಧಾರದ ಮೇಲೆ ನಡೆಯಬೇಕು. ಸಾಕ್ಷ್ಯಗಳು ಕಣ್ಣೆದುರಿಗಿದ್ದರೂ ಕಾನೂನು ಕ್ರಮ ಕೈಗೊಳ್ಳುವುದನ್ನು ತಡೆಯುತ್ತಿರುವವರು ಯಾರು ಎಂಬುದು ಪ್ರಶ್ನೆಯಾಗಿದೆ,” ಎಂದು ಸಲಾಂ ಉಚ್ಚಿಲ್ ತಿಳಿಸಿದ್ದಾರೆ.

“ನಾವು ಭಾರತದ ಸಂವಿಧಾನಾತ್ಮಕ ಕಾನೂನು ವ್ಯವಸ್ಥೆಯಲ್ಲಿದ್ದೇವೆಯೇ? ಅಥವಾ ಕಾನೂನು ಕೂಡ ವ್ಯಕ್ತಿ ಮತ್ತು ಸಂಘಟನೆಗಳನ್ನು ನೋಡಿ ಬದಲಾಗುತ್ತದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.

ಸರ್ಕಾರ ಮತ್ತು ಪೊಲೀಸ್ ಇಲಾಖೆ ಈ ಕುರಿತು ಪಾರದರ್ಶಕವಾಗಿ ಸ್ಪಷ್ಟನೆ ನೀಡಬೇಕು ಹಾಗೂ ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಸಮಾನ ಮನಸ್ಕರ ಒಕ್ಕೂಟ ಆಗ್ರಹಿಸಿದೆ.


Next Post Previous Post
No Comment
Add Comment
comment url




sr7themes.eu.org