ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು–ಉಳ್ಳಾಲದಲ್ಲಿ ನೆಬಿ ದಿನಾಚರಣೆಯ ಸಂಭ್ರಮ: ಯು.ಟಿ. ಖಾದರ್ ಹಾಜಿ ಅವರಿಂದ ಮಿಲಾದುನ್ನಬಿ ಜಾಥಾಕ್ಕೆ ಚಾಲನೆ
ಉಳ್ಳಾಲದಲ್ಲಿ ಮೊಳಗಿದ ಸೌಹಾರ್ದತೆಯ ಸಂದೇಶ: ಮಿಲಾದುನ್ನಬಿ ಬೃಹತ್ ಕಾಲ್ನಡಿಗೆ ಜಾಥಾ
ಉಳ್ಳಾಲ: ಲೋಕಾನುಗ್ರಹಿ ಪ್ರವಾದಿ ಹಜ್ರತ್ ಮೊಹಮ್ಮದ್ ಮುಸ್ತಫಾ (ಸ.ಅ.) ಅವರ ಜನ್ಮದಿನಾಚರಣೆಯ ಪ್ರಯುಕ್ತ ಉಳ್ಳಾಲ ಜುಮಾ ಮಸ್ಜಿದ್–402 ಹಾಗೂ ಸಯ್ಯಿದ್ ಮದನಿ ದರ್ಗಾ ಕಮಿಟಿ ವತಿಯಿಂದ ಮಿಲಾದುನ್ನಬಿ ಬೃಹತ್ ಕಾಲ್ನಡಿಗೆ ಜಾಥಾವನ್ನು ಅದ್ಧೂರಿಯಾಗಿ ಆಯೋಜಿಸಲಾಯಿತು.
ಕೋಟಿಪುರ ಜುಮಾ ಮಸೀದಿಯ ಖತೀಬರ ದುಆದೊಂದಿಗೆ ಜಾಥಾಕ್ಕೆ ಚಾಲನೆ ನೀಡಲಾಯಿತು. ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಜ್ ಹಾಗೂ ವಕ್ಫ್ ಸಚಿವರಾದ ಯು.ಟಿ. ಖಾದರ್ ಸಾಹೇಬ್ ಅವರು ಜಾಥಾಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಯು.ಟಿ. ಖಾದರ್ ಅವರು, “ಪ್ರವಾದಿಯವರ ಪ್ರೀತಿ, ಸೌಹಾರ್ದತೆ, ಶಾಂತಿ ಮತ್ತು ಮಾನವೀಯತೆಯ ಸಂದೇಶವನ್ನು ಸಾರುವುದೇ ಮಿಲಾದುನ್ನಬಿಯ ಉದ್ದೇಶ” ಎಂದು ಹೇಳಿದರು.
ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ.) ಅವರ ಜೀವನ ಮತ್ತು ಬೋಧನೆಗಳು ಪ್ರೀತಿ, ಸಹನೆ, ಪರಸ್ಪರ ಗೌರವ ಹಾಗೂ ಸಹೋದರತ್ವದ ದಾರಿಯನ್ನು ತೋರಿಸುತ್ತವೆ. ಧರ್ಮ, ಜಾತಿ ಹಾಗೂ ಭಾಷೆಯ ಭೇದಗಳನ್ನು ಮರೆತು ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಬೇಕು. ಬಡವರು, ದುರ್ಬಲರು ಹಾಗೂ ಅಗತ್ಯವಿರುವವರ ನೆರವಿಗೆ ನಿಲ್ಲುವುದು ನಿಜವಾದ ಮೀಲಾದ್ ಆಚರಣೆಯ ಅರ್ಥವಾಗಿದೆ ಎಂದು ಅವರು ತಿಳಿಸಿದರು.
ಜಾಥಾದಲ್ಲಿ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಕಮಿಟಿಯ ಅಧ್ಯಕ್ಷರಾದ ಬಿ.ಜಿ. ಹನೀಫ್ ಹಾಜಿ ಸೇರಿದಂತೆ ದರ್ಗಾ ಆಡಳಿತ ಕಮಿಟಿಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಕೋಟಿಪುರದಿಂದ ಆರಂಭಗೊಂಡ ಜಾಥಾವು ಮುಕ್ಕಚೇರಿ, ಆಜಾದ್ ನಗರ, ಮೇಲಂಗಡಿ ಸೇರಿದಂತೆ ಉಳ್ಳಾಲದ ಪ್ರಮುಖ ರಸ್ತೆಗಳ ಮೂಲಕ ಸುಮಾರು 2–3 ಕಿಲೋಮೀಟರ್ ಕ್ರಮಿಸಿ ಉಳ್ಳಾಲ ದರ್ಗಾವನ್ನು ತಲುಪಿತು.
ಮಳೆಯನ್ನೂ ಲೆಕ್ಕಿಸದೆ ಮದರಸ ವಿದ್ಯಾರ್ಥಿಗಳು, ಉಸ್ತಾದರು, ಮದರಸ ಪ್ರಾಧ್ಯಾಪಕರು ಹಾಗೂ ಸಾರ್ವಜನಿಕರು ಸೇರಿದಂತೆ ಅಪಾರ ಸಂಖ್ಯೆಯ ಜನರು ಜಾಥಾದಲ್ಲಿ ಪಾಲ್ಗೊಂಡರು. ಸ್ವಲಾತ್ ಹಾಗೂ ದಫ್‌ನೊಂದಿಗೆ ಶಾಂತಿಯುತವಾಗಿ ಸಾಗಿದ ಜಾಥಾ ಗಮನ ಸೆಳೆಯಿತು. ವಿವಿಧ ವಸ್ತ್ರಗಳಲ್ಲಿ ಭಾಗವಹಿಸಿದ್ದ ಮದರಸ ವಿದ್ಯಾರ್ಥಿಗಳ ಸೊಗಸಾದ ವಸ್ತ್ರಧಾರಣೆ ಜಾಥೆಗೆ ವಿಶೇಷ ಮೆರುಗು ನೀಡಿತು.
ಜಾಥೆಯುದ್ದಕ್ಕೂ ವಿವಿಧ ಮೊಹಲ್ಲಾಗಳ ವತಿಯಿಂದ ತಂಪು ಪಾನೀಯ, ಹಣ್ಣುಹಂಪಲು ಹಾಗೂ ಸಿಹಿತಿಂಡಿಗಳನ್ನು ವಿತರಿಸುವ ಮೂಲಕ ಭಾಗವಹಿಸಿದವರಿಗೆ ಆತ್ಮೀಯ ಸೇವೆ ಸಲ್ಲಿಸಲಾಯಿತು.
ಒಟ್ಟಾರೆ, ಮಿಲಾದುನ್ನಬಿ ಜಾಥಾವು ಪ್ರವಾದಿ ಮುಹಮ್ಮದ್ (ಸ.ಅ.) ಅವರ ಪ್ರೀತಿ, ಶಾಂತಿ, ಸಹೋದರತ್ವ, ಮಾನವೀಯತೆ ಮತ್ತು ಪರಸ್ಪರ ಗೌರವದ ಸಂದೇಶವನ್ನು ಸಮಾಜಕ್ಕೆ ಸಾರಿದ ಸುಂದರ ಕಾರ್ಯಕ್ರಮವಾಗಿ ಗಮನ ಸೆಳೆಯಿತು.
“ಧರ್ಮದ ಹೆಸರಿನಲ್ಲಿ ವಿಭಜನೆಯಲ್ಲ, ಮಾನವೀಯತೆಯ ಹೆಸರಿನಲ್ಲಿ ಒಗ್ಗಟ್ಟೇ ನಮ್ಮ ಸಂದೇಶ.”
ನೇರ ಮಾಹಿತಿ: ಸೋಶಿಯಲ್ ಫಾರೂಕ್, ಸಾಮಾಜಿಕ ಕಾರ್ಯಕರ್ತರು
— Shan Media News
