ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಲಾಂಛನ ಬಿಡುಗಡೆ

 


           *ಯುನಿವೆಫ್ ಕರ್ನಾಟಕ* ವತಿಯಿಂದ *“ಸರ್ವಾಧಿಕಾರ ಹಾಗೂ ಮಾನವ ಸ್ವಾತಂತ್ರ್ಯ ಮತ್ತು ಪ್ರವಾದಿ ಮುಹಮ್ಮದ್ ﷺ”* ಎಂಬ ವಿಷಯದೊಂದಿಗೆ ಹಮ್ಮಿಕೊಳ್ಳಲಾಗಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ *ಲಾಂಛನ ಬಿಡುಗಡೆ* ಕಾರ್ಯಕ್ರಮವು ಪಳ್ನೀರ್‌ನ ದಾರುಲ್ ಇಲ್ಮ್ ಸಭಾಂಗಣದಲ್ಲಿ ನಡೆಯಿತು.


       *ಖ್ಯಾತ ಮಕ್ಕಳ ತಜ್ಞ ಡಾ. ಅಬ್ದುಲ್ ಬಾಸಿತ್* ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಭಿಯಾನದ ಲಾಂಛನವನ್ನು ಬಿಡುಗಡೆಗೊಳಿಸಿದರು.

        ಬಳಿಕ ಮಾತನಾಡಿದ ಅವರು “ವಿಪತ್ತುಗಳು ಬಂದಾಗ ನಾವು ದೇವನನ್ನು ನೆನಪಿಸಿಕೊಳ್ಳುತ್ತೇವೆ. ಕೊರೋನಾ, ಭೂಕಂಪ, ಪ್ರವಾಹ ಸೇರಿದಂತೆ ಹಲವು ವಿಪತ್ತುಗಳನ್ನು ನಾವು ಎದುರಿಸಿದ್ದೇವೆ. ವಿಪತ್ತುಗಳು ಬಂದಾಗ ಪರಲೋಕ ಜೀವನದ ಬಗ್ಗೆಯೂ ಚಿಂತಿಸುತ್ತೇವೆ. ಆದರೆ ವಿಪತ್ತುಗಳು ದೂರವಾದ ಬಳಿಕ ಮತ್ತೆ ಹಿಂದಿನ ಜೀವನಕ್ಕೆ ಮರಳುತ್ತೇವೆ. ಅನಿಶ್ಚಿತತೆಯಿಂದ ಕೂಡಿರುವ ಈ ಬದುಕಿನಲ್ಲಿ ಪ್ರವಾದಿ ಮುಹಮ್ಮದ್ ﷺ ಅವರ ಬೋಧನೆಗಳನ್ನು ಅನುಸರಿಸುವುದರಿಂದ ಮಾತ್ರ ನಿಜವಾದ ಮುಕ್ತಿ ಹಾಗೂ ಮನಶ್ಶಾಂತಿ ಸಾಧ್ಯ,” ಎಂದರು.

         “ನಮ್ಮ ಮನಸ್ಸು ಮತ್ತು ಮಿದುಳಿನಲ್ಲಿ ಸದಾ ಪ್ರವಾದಿಯವರ ಬೋಧನೆಗಳು ಹಾಗೂ ಕುರ್‌ಆನಿನ ಆದೇಶ-ನಿರ್ದೇಶನಗಳು ನೆಲೆಗೊಂಡು, ಅವುಗಳನ್ನು ಜೀವನದಲ್ಲಿ ಪಾಲಿಸಿಕೊಂಡು ಮುನ್ನಡೆದಾಗ ಯಾವುದೇ ವಿಪತ್ತು ಎದುರಾದರೂ ಅದನ್ನು ಧೈರ್ಯದಿಂದ ಎದುರಿಸುವ ಹಾಗೂ ಅದಕ್ಕೆ ಸಿದ್ಧರಾಗುವ ಮನೋಭಾವ ನಮ್ಮಲ್ಲಿ ಮೂಡುತ್ತದೆ,” ಎಂದು ಅವರು ಹೇಳಿದರು.


          ಕಾರ್ಯಕ್ರಮದ ಮತ್ತೋರ್ವ ಅತಿಥಿ, ಮಂಗಳೂರು ಮಹಾನಗರ ಪಾಲಿಕೆಯ *ಮಾಜಿ ಕಾರ್ಪೊರೇಟರ್ ಶಂಸುದ್ದೀನ್ ಮಾತನಾಡಿ,* ಯುನಿವೆಫ್ ಕರ್ನಾಟಕ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಸಂಘಟನೆಯಾಗಿದೆ ಎಂದರು.

         ಇನ್ನೋರ್ವ ಅತಿಥಿ, *ಮಾಜಿ ಅನಿವಾಸಿ ಭಾರತೀಯರ ಸಂಘದ ಅಧ್ಯಕ್ಷ ಸಾಹುಲ್ ಹಮೀದ್ ಮಾತನಾಡಿ,* “ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನರ ಮನಸ್ಸುಗಳನ್ನು ತಲುಪುವ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಯುನಿವೆಫ್ ಕರ್ನಾಟಕ ಹಮ್ಮಿಕೊಂಡಿದೆ. ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ಯಂತಹ ಅಭಿಯಾನಗಳು ಜನರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ದೂರಗೊಳಿಸಲು ಸಹಾಯಕವಾಗಲಿವೆ. ಸೌಹಾರ್ದತೆ ಮತ್ತು ಸಹಬಾಳ್ವೆಯ ಬದುಕನ್ನು ನಿರ್ಮಿಸಲು ಯುನಿವೆಫ್ ಕರ್ನಾಟಕ ಸದಾ ಬದ್ಧವಾಗಿದೆ. ಈ ಅಭಿಯಾನಕ್ಕೆ ನಮ್ಮ ಸಂಪೂರ್ಣ ಸಹಕಾರ ಮತ್ತು ಬೆಂಬಲವಿದೆ,” ಎಂದು ಹೇಳಿದರು.


*ಅಧ್ಯಕ್ಷೀಯ ಭಾಷಣ ಮಾಡಿದ ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ,* ಪ್ರವಾದಿ ಮುಹಮ್ಮದ್ ﷺ ಅವರ ಜೀವನ ಮತ್ತು ಸಂದೇಶಗಳನ್ನು ಸಮಾಜದ ಎಲ್ಲ ವರ್ಗದ ಜನರಿಗೆ ತಲುಪಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು. ಪ್ರವಾದಿಯವರ ಜೀವನವು ಮಾನವೀಯತೆ, ಸೌಹಾರ್ದತೆ, ಕರುಣೆ, ನ್ಯಾಯ ಮತ್ತು ಸಹಬಾಳ್ವೆಯ ಅತ್ಯುತ್ತಮ ಮಾದರಿಯಾಗಿದ್ದು, ಅವರ ನೈಜ ಸಂದೇಶವನ್ನು ಜನರಿಗೆ ಪರಿಚಯಿಸುವ ಮೂಲಕ ಸಮಾಜದಲ್ಲಿ ಉಂಟಾಗಿರುವ ತಪ್ಪು ಕಲ್ಪನೆಗಳನ್ನು ನಿವಾರಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು. ವಿವಿಧ ಕಾರ್ಯಕ್ರಮಗಳ ಮೂಲಕ ಪ್ರವಾದಿಯವರ ಜೀವನ ಮತ್ತು ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.

      *ಮಂಗಳೂರು ಶಾಖೆಯ ಅಧ್ಯಕ್ಷ ಉಬೈದುಲ್ಲಾ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು. ಫಹೀಮುದ್ದೀನ್ ಅವರು ಕಿರಾಅತ್ ಪಠಿಸಿದರು.*



*ಅಭಿಯಾನದ ಅವಧಿ: 4 ಸೆಪ್ಟೆಂಬರ್ 2026 ರಿಂದ 13 ನವೆಂಬರ್ 2026 ರವರೆಗೆ*

*ಅಭಿಯಾನದ ವಿಷಯ:“ಸರ್ವಾಧಿಕಾರ ಹಾಗೂ ಮಾನವ ಸ್ವಾತಂತ್ರ್ಯ ಮತ್ತು ಪ್ರವಾದಿ ಮುಹಮ್ಮದ್ ﷺ”*

Next Post Previous Post
No Comment
Add Comment
comment url




sr7themes.eu.org